ಎಂಕಿಡು

	ಗಿಲ್ಗಾಮೆಷ್, ಸುಮೇರಿಯನ್ ಮತ್ತು ಬ್ಯಾಬಿಲೋನಿಯನ್ ಪುರಾಣ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಒಂದು ಕಥೆಯ ನಾಯಕ. ಮೊದಲಿಗೆ ಗಿಲ್ಗಾಮೆಷನನ್ನು ಸೋಲಿಸಲೆಂದೇ ಅರೂರು ಎಂಬ ಸುಮೇರಿಯನ್ ದೇವತೆಯಿಂದ ಸೃಷ್ಟಿಸಲ್ಪಟ್ಟ ಎಂಕಿಡು ಕಾಡಿನಲ್ಲಿ ದುಷ್ಟ ಪ್ರಾಣಿಗಳ ಜೊತೆಯಲ್ಲಿ ಬೆಳೆದು ಮಹಾ ಬಲಶಾಲಿಯೂ ವೀರನೂ ಆಗಿದ್ದು ಕಾಡುಪ್ರಾಣಿಗಳ ಗುಣಗಳನ್ನೇ ಹೊಂದಿದ್ದ. ಗಿಲ್ಗಾಮೆಷನಿಂದ ಕಳುಹಿಸಲಾದ ಒಬ್ಬ ವೇಶ್ಯೆಯಿಂದ ಆಕರ್ಷಿತನಾಗಿ ಪಟ್ಟಣಕ್ಕೆ ಬಂದಾಗ ಅವನ ಮತ್ತು ಗಿಲ್ಗಾಮೆಷರ ಮಧ್ಯೆ ಘೋರ ಕಾದಾಟ ನಡೆದರೂ ಯಾರೊಬ್ಬರೂ ಸೋಲದೆ ಕೊನೆಗೆ ಇಬ್ಬರೂ ಆಪ್ತಸ್ನೇಹಿತರಾದರು. ಅನಂತರ ಇವರು ಒಗ್ಗಟ್ಟಿನಿಂದ ಅನೇಕ ಸಾಹಸ ಕೆಲಸಗಳನ್ನು ಸಾಧಿಸಿದರು. ಸೆಡಾರ್ ಪರ್ವತಪ್ರದೇಶದಲ್ಲಿ ವಾಸವಾಗಿದ್ದ ಭಯಂಕರವಾದ ಹುವಾವ ಅಥವಾ ಹುಂಬಾಬನನ್ನು ಕೊಂದುದು ಈ ಸಾಹಸಗಳಲ್ಲೊಂದು. ಸುಮೇರಿಯನ್ ಮೂಲಗಳ ಪ್ರಕಾರ ಎಂಕಿಡು ಸಾಯಲೇ ಇಲ್ಲ. ಅಧೋಲೋಕಕ್ಕೆ ಹೋಗಿ, ಅಲ್ಲಿನ ನೀತಿನಿಯಮಗಳನ್ನು ಉಲ್ಲಂಘಿಸಿ ಅಲ್ಲಿಯೇ ಬಂಧಿತನಾದ. ಬ್ಯಾಬಿಲೋನಿಯನ್ ಗ್ರಂಥಗಳ ಪ್ರಕಾರ ಈತ ಮರಣ ಹೊಂದಲಾಗಿ ಗಿಲ್ಗಾಮೆಷ್ ತನ್ನ ಗೆಳೆಯನ ಸಾವಿಗಾಗಿ ಗೋಳಾಡಿದ. ಅಧೋಲೋಕದಿಂದ ಅಪ್ಪಣೆ ಪಡೆದು ಬಂದ ಎಂಕಿಡು ತನ್ನ ಗೆಳೆಯನಿಗೆ ಸತ್ತವರ ಪರಿಸ್ಥಿತಿಯನ್ನು ವರ್ಣಿಸಲಾಗಿ ವಿವಶನಾದ ಗಿಲ್ಗಾಮೆಷ್ ಅಮರತ್ವ ಪಡೆಯುವ ಪ್ರಯತ್ನದಲ್ಲಿ ನಿರತನಾದ.											
 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ